Tuesday, March 23, 2010

ತರ್ಲೆಕುಂಟನಹಳ್ಳಿಯ Da Vinci Code

ತರ್ಲೆಕುಂಟನಹಳ್ಳಿಯಲ್ಲಿ ಇಂಥಹ ಒಂದು ದೊಡ್ಡ ಅನಾಹುತ ನಡೆಯತ್ತೆಂದು ಪತ್ತೇದಾರಿ ಮಾದೇಶ ಕನಸಲ್ಲೊ ಎಣಸಿರಲಿಲ್ಲ. ಅದು ಹೇಗೊ ಏನೋ ಆ ಊರಿನ ಆಂಗ್ಲರ ಪಳೆಯುಳಿಕೆಯಂತಿದ್ದಹ ಸಂಗ್ರಹಾಲಯದ ಪಾಲಕ ರಂಗಜ್ಜ ಸಾವಿಗೀಡಾದ.  ಮಾದೇಶನಿಗೆ ಇನ್ನೂ ನೆನಪಿದೆ. ರಕ್ತದ ಮಡುವಿನಲ್ಲಿ ಬಿದ್ದಿದ ರಂಗಜ್ಜ ಹುಚ್ಚನಂತೆ ಕೇಕೆ ಹಾಕುತ್ತ ತನ್ನ ಅಂತಿಮ ಕ್ಷಣಗಳಲ್ಲಿ ಕೂಗಿದ ಪದಗಳು, "Da Vinci, ಅದು Da Vinci, ನಮ್ಮ ಊರಿನ Da Vinci Code-ಉ!!"

ಆಗ ಮಾದೇಶನಿಗೆ ನೆನಪಿಗೆ ಬಂದದ್ದು ಅದೇ ಹೆಸರಿನ ಒಂದು ಅಂಗ್ಲ ಚಲನಚಿತ್ರ. ಹೌದು.. ರಂಗಜ್ಜ ಹೇಳಬಯಸಿದ್ದು ಈ ಚಿತ್ರದ ಬಗ್ಗೆಯೇ ಇರಬೇಕು, ಏಕೆಂದರೆ ರಂಗಜ್ಜ ಖಂಡಿತ ಹುಚ್ಚನಂತೂ ಅಲ್ಲ.ಸದಾ ಊರಿನವರ ಬಾಯಿಯಲ್ಲಿ ತನ್ನ ಪತ್ತೆದಾರಿಕೆಯಿಂದ ಬೈಗುಳಗಳನ್ನು ತಿನ್ನುತಿದ್ದ ಮಾದೇಶ ಇದರ ಬಗ್ಗೆ ಏನಾದರು ಮಾಡಲೇಬೇಕು, ಇದು ನನ್ನ ಪತ್ತೆದಾರಿಕೆಗೆ ಒಂದು ಸವಾಲು ಎಂದು ಯೋಚಿಸಿದ. ತಕ್ಷಣವೇ ಪಟ್ಟಣದಲಿದ್ದ ತನ್ನ ಗೆಳೆಯ ಪರಮೇಶಿಗೆ ಕರೆ ಮಾಡಿದ.

"ಓಹ್ಹೋಹೋ !! ಏನಪ್ಪೋ ಮಾದೇಶ ? ಇಟ್ಟು ದಿನಗಳ ಮೇಲೆ ನನ್ನ ನೆನಪು ಬಂತೆನೂ? ", ಅತ್ತ ಕಡೆಯಿಂದ ಪರಮೇಶಿ ಕೂಗಿದ.

"ಹೂ ಕಣಲೇ.. ನಿನ್ನಿಂದ ತುರ್ತಾಗಿ ಒಂದು ಕೆಲಸ ಆಗಬೇಕಿತ್ತೋ", ಮಾದೇಶ ಅಳುಕಿದ.

"ಗೊತ್ತಿತು, ಏನೋ ಕೆಲಸ ಇಟ್ಕೊಂಡೇ ಫೋನ್ ಮಾಡ್ತಾ ಇದ್ದೀಯ ಅಂತ. ಹ್ಞೂ, ಅದೇನು ಅಂತ ಹೇಳಪ್ಪ", ಪರಮೇಶಿ ಕೇಳಿದ.

"ದೊಡ್ಡ ಕೆಲಸ ಏನು ಅಲ್ಲ ಕಣೋ. ನನಗೆ ಇ Da Vinci Code ಅಂತ ಒಂದು ಇಂಗ್ಲಿಷ್ ಚಿತ್ರದ್ದು c.d ಬೇಕಿತ್ತು. ಸಿಗುತ್ತಾ ?", ಮಾದೇಶ ಕೇಳಿದ.

"ಅದಾ ?", ರಾಗವೆಳೆದ ಪರಮೇಶಿ. "ಸಿಗಬಹುದು.. ಏನಿದು ಇಂಗ್ಲಿಷ್ ಚಿತ್ರ ನೋಡೋ ಆಸೆ? ಏನ್ ಕಥೆನಪ್ಪ?"

"ಯಾವುದೋ matter ಬಗ್ಗೆ ನೋಡಬೇಕಿತ್ತಪ್ಪ. ಫೋನ್ ನಲ್ಲಿ ಹೇಳಕ್ಕಾಗೋಲ್ಲ", ಮಾದೇಶ ಉತ್ತರಿಸಿದ.

"ಓಹೋ ಏನೋ serious ಆದಹಂಗೆ ಇದೆ ಹಾಗಾದರೆ.. ಸರಿ ಆದಷ್ಟು ಬೇಗ ಕಳಿಸ್ತೀನಿ", ಎಂದ ಪರಮೇಶಿ.

"ಥ್ಯಾಂಕ್ಸ್ ಕಣೋ ತುಂಬ", ಎಂದು ಹೇಳಿ ಫೋನ್ ಇಟ್ಟ.

=========================================================================

೩ ದಿವಸದ ನಂತರ ಮಾದೇಶನ ಕೈಯಲ್ಲಿ "The Da Vinci Code" c.d ಇತ್ತು. ತಕ್ಷಣವೇ ಅದನ್ನು ನೋಡಲು ಹಚ್ಚಿದ.

ಚಿತ್ರದ ಆರಂಭದ ಸನ್ನಿವೇಶವನ್ನು ನೋಡಿದಾಕ್ಷಣ ಆತನ ತಲೆ ಸುತ್ತಿದ ಹಾಗಾಯಿತು. ಅರೇ!! ರಂಗಜ್ಜ ಹೇಳಲು ಯತ್ನಿಸಿದ್ದು ಇದನ್ನೇ ಎಂದು ಖಾತ್ರಿ ಆಯಿತು. ಆ ಚಿತ್ರದ Louvre ಸಂಗ್ರಹಾಲಯದ ಪಾಲಕನ ಕೊಲೆಯ ಸನ್ನಿವೇಶ, ತಮ್ಮ ಊರಿನ ಸಂಗ್ರಹಾಲಯದ ಪಾಲಕ ರಂಗಜ್ಜನ ಕೊಲೆ!! ಒಹ್..


=========================================================================


ಮರುದಿನ ಸಂಜೆ ಪತ್ತೇದಾರಿ ಮಾದೇಶ ಊರಿನ ಮುಖಂಡರ ಮನೆಗೆ ಬಂದ.

"ಮುಖಂಡರೇ, ನಿಮ್ಮ ಬಳಿ ಒಂದು ಮಹತ್ವದ ವಿಷಯ ಮಾತನಾದಬೇಕಾಗಿದೆ. ನನಗೆ ಕೊನೆಗೂ ರಂಗಜ್ಜನ  ಕೊಲೆ ಯಾರು ಮಾಡಿರಬಹುದೆಂಬುದು ತಿಳಿಯಲ್ಪಟ್ಟಿದೆ", ಎಂದು ಶುರು ಮಾಡಿದ.

"ಏನ್ ಮಾತಾಡ್ತಾಯಿದ್ದಿಯಪ್ಪ  ? ರಂಗಜ್ಜ ಕೊಲೆ ಅದನೆ? ಛೆ ಛೆ.. ಅವನು ಸಾಕಿದ ಗೂಳಿ ಅಕಸ್ಮಾತ್ ಆಗಿ ತಿವಿದು ಆಟ ಮೃತಪಟ್ಟನಲ್ಲವೇ..", ಎಂದರು ಮುಖಂಡರು.

"ನೋಡೋದಿಕ್ಕೆ ಹಾಗೆ ಕಾಣುತ್ತೆ, ಮುಖಂಡರೆ.. ಆದರೆ ಇಗೋ ನೋಡಿ ನನ್ನ ಕೈಯಲ್ಲಿ ಪುರಾವೆ ಇದೆ",  ಎಂದು ಹೇಳಿ 'The Da Vinci Code' c.d ಅನ್ನು ಹೊರ ತೆಗೆದ. "ಇದಿರಲ್ಲಿ ಇದೆ, ರಂಗಜ್ಜ ಸಾಯೋ ಮೊದಲು ಹಾಗೆ ಹುಚ್ಚನಂತೆ ಏಕೆ ಕೂಗಿದ ಅಂತ.. ಅವನ ಕೊಲೆ Opus Dei ಅನ್ನೋ ಒಂದು ಗುಂಪಿನ ಸಂಚು. ನೀವೂ ನೋಡಿ ಧಣಿಗಳೇ. ನಿಮಗೆ ತಿಳಿಯುತ್ತೆ."

"ಅದರ ಅವಶ್ಯಕತೆ ಇಲ್ಲ.."

ಮುಖಂಡರ ಮಗ ಗೋವಿಂದ ಅಲ್ಲಿಗೆ ಬಂದ.

"ನೋಡಪ್ಪ.. ಒಂದು ಸಲ ಇದನ್ನು ನೋಡಿದರೆ, ಎಲ್ಲ ಗೊತ್ತಾಗುತ್ತೆ ನಿಮಗೆ..", ಮತ್ತೆ ಶುರು ಮಡಿದ ಮಾದೇಶ..

"ಏಯ್ ಮಾದೇಶ.. ಗೊತ್ತಿಲ್ಲದೇ ಇರುವವನು ನೀನು..", ಕಿಡಿ ಕಾರಿದ ಗೋವಿಂದ. "ರಂಗಜ್ಜನ ಗೂಳಿಯ ಹೆಸರೇನು ಗೊತ್ತೇನು? ಒಂದು Michanangelo, ಮತ್ತೊಂದು Leonardo Da Vinci.. ಆತನನ್ನು ತಿವಿದಿದ್ದು Da Vinci.. Da Vinci ಯ ಕೋಡಿನಿಂದ ತಿವಿದ ವಿಷಯದಲ್ಲಿ ತನ್ನ ಕೊನೆಯ ಕ್ಷಣದಲ್ಲೂ ಸ್ವಾರಸ್ಯ ಕಂಡ ರಂಗಜ್ಜ. ನೀ ಮತ್ತೆ ಏನೋ ಒಂದು ಸುರು ಮಾಡಬೇಡ. ದೊಡ್ಡ ಪತ್ತೇದಾರಿ ಥರ..."

ಮುಖಂಡರು ಎದ್ದು ಒಳ ನಡೆದರು.
ತರ್ಲೆಕುಂಟನಹಳ್ಳಿಯ ಮಹಾನ್ ಪತ್ತೇದಾರಿ ಮಾದೇಶನ ಬಿಟ್ಟ ಬಾಯಿ ಬಿಟ್ಟೇ ಇತ್ತು..

No comments:

Post a Comment